ಕೋಶಗಳು (ತತ್ತ್ವಶಾಸ್ತ್ರದಲ್ಲಿ)
	
ಕೋಶ ಎಂದರೆ ಒರೆ, ಕವಚ, ಹೊದಿಕೆ ಎಂದು ಅರ್ಥ. ಇಲ್ಲಿ ನಮಗೆ ಪ್ರಸಕ್ತವಾಗಿರುವ ಕೋಶಗಳು ಆತ್ಮನನ್ನು ಆಚ್ಛಾದಿಸಿರುವ ಕೋಶಗಳು ಮತ್ತು ಅವಕ್ಕೆ ಸಮಾನಾಂತರವಾದ, ವಿಶ್ವವನ್ನು ಆಚ್ಛಾದಿಸಿರುವ ಕೋಶಗಳು. ಮನುಷ್ಯನ ಆತ್ಮದ ಹೊದಿಕೆಗಳು ಐದು: ಅನ್ನ ಕೋಶ ಪ್ರಾಣಕೋಶ, ಮನೋಕೋಶ, ಬುದ್ಧಿಕೋಶ, ಪ್ರೀತಿ ಅಥವಾ ಆನಂದಕೋಶ. ಮಾನವನ ಜೀವ ಈ ಕೋಶಗಳನ್ನು ಪಡೆದಿರುವುದಕ್ಕೆ ಪರಮಾತ್ಮನ ಅನ್ನಮಯ, ಪ್ರಾಣಮಯ ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ ಕೋಶಗಳು ಆಧಾರ. ಇವುಗಳಲ್ಲಿ ಪ್ರಾಣಕ್ಕೆ ಅನ್ನ, ಮನಸ್ಸಿಗೆ ಪ್ರಾಣ, ಬುದ್ಧಿಗೆ ಮನಸ್ಸು, ಆನಂದಕ್ಕೆ ಬುದ್ಧಿ ಆಧಾರ. ಒಂದರ ಮೂಲಕ ಒಂದು, ಒಂದರ ಮೇಲೆ ಒಂದು ಏರಿ ಎಲ್ಲ ಕೋಶಗಳೂ ಆನಂದಮಯ ಕೋಶದಲ್ಲಿ ಮುಕ್ತಾಯವಾಗುತ್ತವೆ. ಎಲ್ಲವೂ ಆನಂದದಿಂದ ಹುಟ್ಟಿ, ಆನಂದದಿಂದ ಸೃಷ್ಟಿಗೊಂಡು ಆನಂದದಲ್ಲಿ ಪರಿಸಮಾಪ್ತಿಗೊಳ್ಳುತ್ತವೆ. ಬ್ರಹ್ಮಮಯವಾದ ಈ ವಿಶ್ವವನ್ನು ಈ ಎಲ್ಲ ಕೋಶಗಳೂ ಆವರಿಸಿವೆ. ಕೋಶತತ್ತ್ವದ ವಿಚಾರವಾಗಿ ಹೆಚ್ಚಿನ ವಿವರಗಳು ತೈತ್ತಿರೀಯ ಉಪನಿಷತ್ತಿನಲ್ಲಿವೆ.   			(ಬಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ